ಚಾಂಗದೇವ-
ಪ್ರಸಿದ್ಧ ಹಠಯೋಗಿ : ರಾಜಯೋಗದಲ್ಲಿ ನಿಪುಣನಾದ ಜ್ಞಾನೇಶ್ವರನ ಸಮಕಾಲೀನ, ಮುಕ್ತಾಬಾಯಿಯಿಂದ ಉಪದೇಶ ಪಡೆದವ. ಒಮ್ಮೆ ಚಾಂಗದೇವ ಬರಹವಿಲ್ಲದ ಕಾಗದ ಒಂದನ್ನು ಪತ್ರವೆಂಬಂತೆ ಜ್ಞಾನದೇವನಿಗೆ ಕಳುಹಿಸಿದ. ಅದಕ್ಕೆ ಉತ್ತರವಾಗಿ ಜ್ಞಾನೇಶ್ವರ 'ಚಾಂಗದೇವ ವಾಸಷ್ಟಿ ಎಂಬ ಪತ್ರವನ್ನು ಕಳಿಸಿದ. ಇದರಿಂದ ಚಾಂಗದೇವನ ಗರ್ವಹರಣವಾಯಿತು. ಹಠಯೋಗವನ್ನು ತೊರೆದು, ಅದಕ್ಕಿಂತ ನೇರ ಪರಮಾತ್ಮನ ಸಾಕ್ಷಾತ್ಕಾರವೇ ಮೇಲೆಂದು ನಂಬಿ ಅದಕ್ಕಾಗಿ ಸಾಧನೆ ಮಾಡಿದ. ಸಂತರಿಗೆ ತಾನು ಶರಣು ಬಂದ ವಿಷಯವನ್ನು ತನ್ನ ಅಭಂಗಗಳಲ್ಲಿ ಚಾಂಗದೇವ ಬಹಳ ಚೆನ್ನಾಗಿ ಹೇಳಿದ್ದಾನೆ: 'ಜ್ಞಾನದೇವ ಹರಿವಾಣದ ತುಂಬ ಮುತ್ತಿನ ನೀರನ್ನು ಕುಡಿದು ತೇಗಿದ. ನಿವೃತ್ತಿನಾಥ ಮೋಡಗಳ ನೆರಳನ್ನೇ ಕೈಯಲ್ಲಿ ಹಿಡಿದು ನಡೆದ. ಸೋಪಾನದೇವ ಹೂವುಗಳ ಹುಡಿಯ ಹಾರವನ್ನು ಧರಿಸಿದ. ಮುಕ್ತಾಬಾಯಿ ಹೀರಕದ ಹುಗ್ಗಿಯನ್ನು ಉಂಡು ತೇಗಿದಳು. ಈ ನಾಲ್ಕು ಜನರ ಮರ್ಮವನ್ನು ಚಾಂಗದೇವ ಸರಿಯಾಗಿ ಅರಿತಿದ್ದಾನೆ. 'ಚಾಂಗದೇವ ಶಾಂತಿಸತಿಯನ್ನು ವರಿಸಲು ನಡೆದಾಗ ಮುಕ್ತಬಾಯಿ ಕಳಸಗಿತ್ತಿಯಾಗಿ ಅರಿಸಿಣ ಹಚ್ಚಿದಳು. ಇದು ಜೀವ ಆತ್ಮರ ಮದುವೆಯೇ ಸರಿ- ಎಂದೂ ತಂಗಳಿಲ್ಲದೆ ನಾನು ಸ್ವರೂಪವನ್ನು ಕಂಡೆ- ಎಂದೂ ತನ್ನ ಅನುಭವವನ್ನು ಚಾಂಗದೇವ ಬಿತ್ತರಿಸಿದ್ದಾನೆ; ಶಬ್ದಗಳು ಕೇಳಿಸುವುವೇ ಹೊರತು ದೇವದೇವ ಕಾಣಿಸುವುದಿಲ್ಲ, ಯಾವಾಗಲೂ ಝಣ ಝಣವೆಂದು ಕಿನ್ನರಿಯ ನಾದ ಹೊರಡುವುದು, ಅದನ್ನು ಕೇಳಿ ಚಾಂಗದೇವ ಆನಂದದಿಂದ ಮೈಮರೆಯುವನು- ಎಂದು ತನ್ನ ಅಂತರಂಗಸಿದ್ಧಿಯ ವಿಷಯದಲ್ಲಿ ಹೇಳಿಕೊಂಡಿದ್ದಾನೆ.           (ಎಂ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ